ಕಾಳೀನದಿ

 ಮೈಸೂರು ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಒಂದು ನದಿ. ಪಶ್ಚಿಮ ಘಟದಲ್ಲಿ ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿ ಇದರ ಉಗಮ. ಸ್ವಲ್ಪದೂರ ಆಗ್ನೇಯಾಭಿಮುಖವಾಗಿ ಹರಿದು, ದಾಂಡೇಲಿಯನ್ನು ಸೋಕಿ ನಿಬಿಡಾರಣ್ನಗಳನ್ನು ಹಾಯ್ದು. ಅನಂತರ ಪಶ್ಚಿಮಕ್ಕೆ ಮೊಗ ಮಾಡಿ ಘಟ್ಟದ ಇಳಿಜಾರಿನಲ್ಲಿ ಜಿಗಿದು, ಉತ್ತರ ಕನ್ನಡ ಜಿಲ್ಲೆಯ ಕೇಂದ್ರವಾದ ಕಾರವಾರದ ಬಳಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ನದಿಯ ಉದ್ದ ಕೇವಲ 100 ಮೈ. (161 ಕಿ.ಮೀ.). ಇದು ಹರಿಯುವ ಮಾರ್ಗದಲ್ಲಿ ಬಹುಭಾಗ ಪರ್ವತ ಪ್ರದೇಶ. ಕಡಲು ಸೇರುವ ಮುನ್ನ ಇದು ದಾಟುವ ಕರಾವಳಿ ಕೂಡ ತೀರ ಕಿರಿದು. ಆದ್ದರಿಂದ ಇದು ನೀರಾವರಿಗೆ ಹೆಚ್ಚಾಗಿ ಉಪಯುಕ್ತವಾಗಿಲ್ಲ. ಕಾಳೀ ನದಿಯ ಇಡೀ ಜಲಾನಯನ ಪ್ರದೇಶದಲ್ಲಿ (4,850 ಚ.ಮೈ.) ವರ್ಷಕ್ಕೆ ಸು. 350" (889 ಸೆಂಮೀ.) ಮಳೆಯಾಗುತ್ತದೆ. ಕಾಳಿಯೂ ಇದರ ಉಪನದಿಗಳಾದ ಪಂಡ್ರಿ, ಬಾರ್ಚಿ, ತಟ್ಟಿಹಳ್ಳ, ಕಾನೇರಿ ವಾಕಿ ಮತ್ತು ಮಾರ್ದಿ ನದಿಗಳೂ ಮಳೆಗಾಲದಲ್ಲಿ (ಜೂನ್-ಸೆಪ್ಟೆಂಬರ್) ತುಂಬಿ ಹರಿಯುತ್ತವೆ. ಈ ನದಿಯ ನೀರಿನ ಘನಗಾತ್ರ 278 ಟಿಎಂಸಿ ಅಡಿ.   

        (ಎಸ್.ಎಸ್‍ಎ.)

 ಕಾಳಿಯ ಅಗಾಧ ಜಲರಾಶಿಯನ್ನು ನೀರಾವರಿಗೆ ಹೆಚ್ಚಾಗಿ ಬಳಸಿಕೊಳ್ಳಲು ಅವಕಾಶವಿಲ್ಲವಾದರೂ ಇದರ ವಿದ್ಯುತ್‍ವಿಭವ ಅಗಾಧವಾದ್ದು (13 ಲಕ್ಷ ಕಿವಾ.) ಈ ಪ್ರದೇಶದಲ್ಲಾಗುವ ಮಳೆಯಲ್ಲಿ ಸೇ. 90 ರಷ್ಟು ಕೇವಲ ನಾಲ್ಕು ತಿಂಗಳುಗಳಲ್ಲಿ-ಜೂನ್ ಮಧ್ಯದಿಂದ ಅಕ್ಟೋಬರ್ ಮಧ್ಯದವರೆಗೆ-ಬೀಳುವುದರಿಂದ ವರ್ಷವಿಡೀ ವಿದ್ಯುದುತ್ಪಾದನೆ ಸಾಧ್ಯವಾಗುವಂತೆ ಇದರ ಪ್ರವಾಹವನ್ನು ನಿಯಂತ್ರಿಸುವುದು ಅವಶ್ಯ. ನದಿ ಅರಬ್ಬೀ ಸಮುದ್ರವನ್ನು ಸೇರುವ ಮುನ್ನ ಅದರಿಂದ ಆದಷ್ಟು ಹೆಚ್ಚಿನ ಪ್ರಯೋಜನ ಪಡೆಯುವ ಸಲುವಾಗಿ ಅಲ್ಲಲ್ಲಿ ಜಲಾಶಯಗಳನ್ನು ನಿರ್ಮಿಸಿ ವಿದ್ಯುದುತ್ಪಾದನ ಕೇಂದ್ರಗಳನ್ನು ಸ್ಥಾಪಿಸಬೇಕಾಗುತ್ತದೆ. ಈ ಸುತ್ತಿನ ನೆಲದ ವ್ಯಾಪಕ ಸಮೀಕ್ಷೆಯನ್ನು ನಡೆಸಲಾಗಿದೆ. ವಿದ್ಯುತ್ತಿನ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ರಚಿಸಲಾಗಿದೆ. ಅಂತಿಮವಾಗಿ ಈ ಕಣಿವೆಯಲ್ಲಿ ಎಂಟು ಕಟ್ಟೆಗಳನ್ನೂ ಆರು ವಿದ್ಯುತ್ ಕೇಂದ್ರಗಳನ್ನೂ ನಿರ್ಮಿಸಿಬೇಕೆಂಬುದು ಉದ್ದೇಶ.

 ಕಾಳೀ ಜಲವಿದ್ಯುತ್ ಯೋಜನೆಯ ಮುಖ್ಯ ಜಲಾಶಯವನ್ನು ಸುಪದ ಬಳಿ ನಿರ್ಮಿಸಲಾಗುತ್ತದೆ. ಅಲ್ಲಿಯ ಕಟ್ಟೆಯ ಎತ್ತರ 320', 10 ಲಕ್ಷ ಕಿವಾ. ವಿದ್ಯುತ್ತಿನ ಉತ್ಪಾದನೆಗೆ ತಗಲುವುದೆಂದು ನಿರೀಕ್ಷಿಸಿರುವ ವೆಚ್ಚ ರೂ. 120 ಕೋಟಿ ಕನಿಷ್ಠ ವೆಚ್ಚದಲ್ಲಿ ಅತ್ಯಂತ ಶೀಘ್ರವಾಗಿ ಇದರ ಫಲ ದೊರಕುವಂತೆ ಯೋಜನಾ ಕಾರ್ಯವನ್ನು ಮುಂದುವರಿಸಬೇಕೆಂಬುದು ಉದ್ದೇಶ.

 ಮೊದಲನೆಯ ಹಂತದಲ್ಲಿ ಬೊಮ್ಮನಳ್ಳಿಯ ಬಳಿ ಕಾಳೀ ನದಿಗೆ ಅಡ್ಡಲಾಗಿ 75' ಎತ್ತರದ ಕಟ್ಟೆ ಕಟ್ಟಲಾಗುತ್ತದೆ. ಇದರಿಂದ ನಿರ್ಮಿತವಾದ ಸರೋವರದ ನೀರನ್ನು 29,100' ಉದ್ದದ ಒತ್ತಡ ಸುರಂಗವೊಂದರ ಮೂಲಕ 75' ವ್ಯಾಸ ಮತ್ತು 225' ಆಳದ ತೊಟ್ಟಿಯೊಳಕ್ಕೆ ಹರಿಸಿ. ಅದಕ್ಕೆ ತಲಾ 12ಳಿ' ವ್ಯಾಸ ಮತ್ತು 2,550' ಉದ್ದ ಇರುವ ಎರಡು ತೂಬುಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ 1,166' ಯ ಔನ್ನತ್ಯ ದೊರಕುತ್ತದೆ. ತಲಾ 165 ಮೆವಾ. ನ ಎರಡು ವಿದ್ಯುಜ್ಜನಕ ಯಂತ್ರಗಳನ್ನು ಸ್ಥಾಪಿಸಿ ಇಲ್ಲಿ ಉತ್ಪತ್ತಿಯಾದ ವಿದ್ಯುತ್ತನ್ನು ಸು. 40 ಮೈ. ದೂರದಲ್ಲಿರುವ ಹುಬ್ಬಳ್ಳಿಗೆ ಸಾಗಿಸಲಾಗುತ್ತದೆ. ಕಾಳಿ, ಶರಾವತಿ ಮತ್ತು ಮುನಿರಾಬಾದ್ (ತುಂಗಭದ್ರಾ ಎಡದಂಡೆ) ವಿದ್ಯುಜ್ಜನಕ ಕೇಂದ್ರಗಳಿಗೆ ಹುಬ್ಬಳ್ಳಿಯ ವಿದ್ಯುತ್ ಸ್ವೀಕಾರ ಕೇಂದ್ರದ ಸಂಪರ್ಕವಿರುತ್ತದೆ. ವಿದ್ಯುಚ್ಛಕ್ತಿಯ ಪ್ರತಿಯೊಂದು ಘಟಕಕ್ಕೆ (ಯೂನಿಟ್) ತಗಲುವ ವೆಚ್ಚ 2.9 ಪೈಸೆ.

 ಅತ್ಯಂತ ಕಡಿಮೆ ವೆಚ್ಚದಲ್ಲಿ. ಬಹುತೇಕ ದೇಶೀಯ ಸಲಕರಣೆ ಮತ್ತು ತಂತ್ರಜ್ಞಾನದ ನೆರವಿನಿಂದ ಮುಂದಿನ ಘಟ್ಟಗಳ ಕಾರ್ಯವನ್ನೂ ಶೀಘ್ರವಾಗಿ ಮುಗಿಸಬೇಕೆಂಬುದು ಉದ್ದೇಶ. ರಾಜ್ಯದ ಆರ್ಥಿಕಾಭಿವೃದ್ಧಿಗೆ ಅತ್ಯವಶ್ಯವೆನಿಸಿದ ಈ ಯೋಜನೆಯ ಕೆಲಸವನ್ನು ಮುಗಿಸುವ ಉದ್ದೇಶದಿಂದ ಮೈಸೂರ್ ಪವರ್ ಕಾರ್ಪೋರೇಷನನ್ನು ಸರ್ಕಾರ ಸ್ಥಾಪಿಸಿದೆ. 

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ